ಹಿಟ್ಲರ್, ಅಡಾಲ್ಫ್
	1889-1945: ಜರ್ಮನಿಯ ಸರ್ವಾಧಿಕಾರಿ (1933-45) ಹಾಗೂ ನಾಜೀ ಪಕ್ಷದ ಸ್ಥಾಪಕ. ಇವನು 1889 ಏಪ್ರಿಲ್ 20 ರಂದು, ಆಸ್ಟ್ರಿಯದ ಬ್ರಾನಾವ್‍ನಲ್ಲಿ ಜನಿಸಿದ. ಇವನ ತಂದೆ ಅಲಾಯಿಸ್, ತಾಯಿ ಕ್ಲಾರಪೊಲ್ಜಲ್. ಇವನ ತಂದೆ ಆಸ್ಟ್ರಿಯದ ಸೇವೆಯಲ್ಲಿದ್ದ ಒಬ್ಬ ಸುಂಕದ ಆಧಿಕಾರಿ, ತಾಯಿ ಅವಿದ್ಯಾವಂತೆ. ಇವನು ತನ್ನ ತಂದೆಯ ಮೂವರು ಪತ್ನಿಯರ ಹಾಗೂ ತಂದೆಯ ಕೋಪತಾಪಗಳಿಗೆ ಗುರಿಯಾಗಿ ಏಕಾಂಗಿಯಾಗಿ ಬೆಳೆಯಬೇಕಾಯಿತು. ಜೊತೆಗೆ ಚಿಕ್ಕ ವಯಸ್ಸಿನಲ್ಲಿ ತಂದೆ (1903) ತಾಯಿ (1907) ಯರನ್ನು ಕಳೆದುಕೊಂಡ ಇವನು ಚಿತ್ರಗಳನ್ನು ಬರೆದು ಮಾರಾಟ ಮಾಡಿ ಜೀವನ ಸಾಗಿಸಬೇಕಾಗಿತ್ತು. ಒಂದನೆಯ ಮಹಾಯುದ್ಧದಲ್ಲಿ ಜರ್ಮನ್ ಸೈನ್ಯ ಸೇರಿ ಹೋರಾಡಿದ. ಅನಂತರ ಜರ್ಮನಿಯನ್ನು ನಿಶ್ಶಸ್ತ್ರೀಕರಣಗೊಳಿಸಿ ದ್ದರಿಂದ ನಿರುದ್ಯೋಗಿಯಾದ ಇವನು ಮ್ಯೂನಿಚ್ ನಗರದಲ್ಲಿ ಗೃಹಾಲಂಕಾರ ಸೇವೆಗೆ ಸೇರಿದ.
	
ಒಂದನೆಯ ಮಹಾಯುದ್ಧದ  ಅನಂತರ ಜರ್ಮನಿಯಲ್ಲಿ ಆರ್ಥಿಕ ಮುಗ್ಗಟ್ಟು ಸಂಭವಿಸಿ ಕೃಷಿ, ಕೈಗಾರಿಕೆ, ವಾಣಿಜ್ಯಗಳು ಹಿಂದುಳಿದವಲ್ಲದೆ, ನಿರುದ್ಯೋಗ ಅಧಿಕಗೊಂಡಿತು. ಈ ಸಮಸ್ಯೆಗಳನ್ನು ನಿವಾರಿಸಲು ಅಧಿಕಾರರೂಢ ಪ್ರಜಾಪ್ರಭುತ್ವ ಸರ್ಕಾರ ವಿಫಲವಾದ್ದರಿಂದ ಅನೇಕ ದಂಗೆಗಳು ನಡೆದವು. ಬೇಡಿಕೆಗಳ ಈಡೇರಿಕೆಗಾಗಿ ಜರ್ಮನಿಯ ಕಾರ್ಮಿಕ ಪಕ್ಷವೊಂದು ಜನ್ಮ ತಾಳಿದಾಗ ಇವನು ಅದನ್ನು ಸೇರಿಕೊಂಡು ಅದಕ್ಕೆ ರಾಷ್ಟ್ರೀಯ ಸಮಾಜವಾದಿ ಜರ್ಮನ್ ಕಾರ್ಮಿಕ ಪಕ್ಷ ಎಂದು ಹೆಸರಿಟ್ಟ. ಮುಂದೆ ಇದೇ ನಾಜೀ ಪಕ್ಷವಾಯಿತು. ಇವನು ಹರಿದು ಹಂಚಿ ಹೋಗಿದ್ದ ಜರ್ಮನ್ ಪ್ರಾಂತಗಳನ್ನು ಒಗ್ಗೂಡಿಸಿ ಅವರಲ್ಲಿ ರಾಷ್ಟ್ರೀಯ ಐಕ್ಯ ಮೂಡಿಸುವುದಾಗಿ ಸಾರಿದ. ಇವನು ಜರ್ಮನ್ನರ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತಾ ಉತ್ಕಟ ರಾಷ್ಟ್ರೀಯತೆಯನ್ನು ಪ್ರಚೋದಿಸಿದ. ರಾಷ್ಟ್ರೀಯತೆಯ ಬುನಾದಿಯ ಮೇಲೆ ಸಮಾಜ ರೂಪಿಸುವುದು ಇವನ ಪಕ್ಷದ ನೀತಿಯಾಯಿತು. ಹೀಗಾಗಿ ಕಾರ್ಮಿಕರು, ರೈತರು ಮತ್ತು ವಿದ್ಯಾರ್ಥಿಗಳು ಈ ಪಕ್ಷವನ್ನು ಬೆಂಬಲಿಸಿದ್ದರಿಂದ ಇವನು ಜನಪ್ರಿಯನಾದ.

	ಇವನು 1923ರಲ್ಲಿ ಜರ್ಮನಿಯ ಗಣರಾಜ್ಯ ಉರುಳಿಸುವ ಯತ್ನ ಮಾಡಿ ಬಂಧನಕ್ಕೊಳಗಾದಾಗ, ಸೆರೆಮನೆಯಲ್ಲಿ ಮೈನ್‍ಕ್ಯಾಂಫ್ ಅಥವಾ ನನ್ನ ಹೋರಾಟ ಎಂಬ ಕೃತಿ ಬರೆದು ಪ್ರಕಟಿಸಿದ. ಅದರಲ್ಲಿ ಜರ್ಮನ್ ಜನತೆಯ ಶ್ರೇಷ್ಠತೆಯನ್ನು ಪ್ರತಿಪಾದಿಸಿ ಅವರ ಐಕ್ಯಕ್ಕೆ ಕರೆಕೊಟ್ಟದ್ದರಿಂದ, ಅದು ನಾಜೀ ಪಕ್ಷದ ಬೈಬಲ್ ಎನಿಸಿಕೊಂಡಿತು.

	ಬಿಡುಗಡೆಯಾದ ಅನಂತರ ಇವನು ನಾಜೀ ಪಕ್ಷವನ್ನು ಜರ್ಮನಿಯ ಪಾರ್ಲಿಮೆಂಟ್ ರಿಚ್‍ಸ್ಟ್ಯಾಗ್‍ನ ಚುನಾವಣೆಗಳಿಗೆ ಸ್ಪರ್ಧೆಗಿಳಿಸಿದ. ಅದು 1924 ರಲ್ಲಿ ಕೇವಲ 14 ಸ್ಥಾನಗಳನ್ನು ಪಡೆಯಿತು. ಅನಂತರ 1930ರಲ್ಲಿ 109 ; 1931ರಲ್ಲಿ 230 ಮತ್ತು 1933ರ ಸಾರ್ವತ್ರಿಕ ಚುನಾವಣೆಗಳಲ್ಲಿ 288 ಸ್ಥಾನಗಳ ಬಹುಮತ ಪಡೆಯಿತು. ಜರ್ಮನಿಯ ಅಧ್ಯಕ್ಷ ಹಿಂಡನ್‍ಬರ್ಗ್ ಇವನನ್ನು ಛಾನ್ಸಲರ್ (ಪ್ರಧಾನಿ) ಆಗಿ ನೇಮಿಸಿ, ಮಂತ್ರಿಮಂಡಲ ರಚಿಸುವಂತೆ ಸೂಚಿಸಿದ. 1934 ಆಗಸ್ಟ್ 2 ರಂದು ಹಿಂಡನ್‍ಬರ್ಗ್ ನಿಧನ ಹೊಂದಲಾಗಿ, ಇವನು ತನ್ನನ್ನು ಪ್ಯೂರರ್ (ನಾಯಕ) ಎಂದು ಘೋಷಿಸಿಕೊಂಡು ಎಲ್ಲಾ ಅಧಿಕಾರವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಂಡು ಜರ್ಮನಿಯ ಸರ್ವಾಧಿಕಾರಿಯಾದ ಐರನ್ ಕ್ರಾಸ್ ಎಂಬ ಬಿರುದು ಪಡೆದುಕೊಂಡ.

	ಇವನು ಎಲ್ಲಾ ಅಧಿಕಾರವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಂಡು ನಿರಂಕುಶ ಆಳಿಕೆ ಆರಂಭಿಸಿದ. ದೇಶದ ಎಲ್ಲಾ ವೃತ್ತಪತ್ರಿಕೆ, ರೇಡಿಯೋ, ಸಿನಿಮಾ, ಶೈಕ್ಷಣಿಕ ಸಂಸ್ಥೆಗಳು, ಸಾಹಿತ್ಯ-ಇವುಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡ. ತನ್ನ ವಿರೋಧಿಗಳನ್ನು ಹತ್ತಿಕ್ಕಲು ಗೆಸ್ಟಪೊ ಎಂಬ ಪಡೆಯನ್ನು ಸ್ಥಾಪಿಸಿದ. ನಾಜೀವಾದಿಗಳ ಗುಂಪನ್ನು ಬ್ರೌನ್‍ಷಟ್ರ್ಸ್ (ನಾಜೀದಳ) ಎಂದು ಕರೆಯಲಾಯಿತು.

	ಇವನು ಜರ್ಮನ್ ಜನತೆಯ ಶ್ರೇಷ್ಠತೆ ಪ್ರತಿಪಾದಿಸಿ ಯಹೂದಿಗಳನ್ನು ಚಿತ್ರಹಿಂಸೆಗೆ ಒಳಪಡಿಸಿ ಜನತೆಯ ಎಲ್ಲಾ ಸ್ವಾತಂತ್ರ್ಯಗಳನ್ನು ಹತ್ತಿಕ್ಕಿದನ ಲ್ಲದೆ, ಇವನ ಆಳಿಕೆಗೆ ನಿಷ್ಠೆ ತೋರುವಂತೆ ಮಾಡಿದ. ಈ ಕಾರ್ಯಗಳಲ್ಲಿ ಇವನ ಸ್ನೇಹಿತ ರುಡಾಲ್ಫ್  ಹೆಸ್ ಸಹಾಯಕ್ಕೆ ನಿಂತ. 1933ರಲ್ಲಿ ಚರ್ಚ್‍ನೊಂದಿಗೆ ಕಾನ್ ಕಾರ್ಡಾಟ್ ಒಪ್ಪಂದ ಮಾಡಿಕೊಂಡು ಚರ್ಚ್‍ನ್ನು ರಾಜಕೀಯದಿಂದ ದೂರ ಇಟ್ಟ. ಕೃಷಿಯ ಪ್ರಗತಿಗಾಗಿ ನ್ಯೂಟ್ರಿಷನ್-ಎಸ್ಟೇಟ್ ಲಾ ಜಾರಿ ಮಾಡಿದ್ದರಿಂದ, ಅದು ರಸಗೊಬ್ಬರಗಳ ಹಾಗೂ ಯಂತ್ರೋಪಕರಣಗಳ ಬಳಕೆಯನ್ನು ಗೊತ್ತುಪಡಿಸಿತು. ಬಂಜರು ಭೂಮಿಗಳನ್ನು ಸಾಗುವಳಿಗೆ ಒಳಪಡಿಸಿ, ಕೃಷಿ ಪ್ರಗತಿ ಹೆಚ್ಚಿಸಿದ. ಸರ್ಕಾರ ಕೃಷಿ ಉತ್ಪನ್ನಗಳ ಮತ್ತು ಕೂಲಿ ಬೆಲೆ ನಿಗದಿ ಮಾಡಿತು. ಆರ್ಥಿಕ ಪ್ರಗತಿಗೆ 1933 ರಲ್ಲಿ 4 ವರ್ಷಗಳ ಆರ್ಥಿಕ ಯೋಜನೆಗಳನ್ನು ಆರಂಭಿಸಿದ. ನಿರುದ್ಯೋಗ ನಿವಾರಣೆಗೆ ರಚನಾತ್ಮಕ ಯೋಜನೆ ರೂಪಿಸಿದನಲ್ಲದೆ, ಜನಸಂಖ್ಯೆ ನಿಯಂತ್ರಣಕ್ಕೆ ತೆರಿಗೆ ಹಾಕಿದ ಹಾಗೂ ವಿವಾಹಕ್ಕಾಗಿ ಸಾಲ ವ್ಯವಸ್ಥೆಯನ್ನು ಜಾರಿಗೊಳಿಸಿದ. ಇವನು ಸರ್ಕಾರ ಸಂಪರ್ಕಗಳ ಅಭಿವೃದ್ಧಿಗೆ ಗಮನ ಕೊಟ್ಟನಲ್ಲದೆ, ಒಟ್ಟಾರೆ ಜರ್ಮನಿ ಯನ್ನು ಆರ್ಥಿಕವಾಗಿ ಪ್ರಬಲಗೊಳಿಸಿದ.

	ಯುದ್ಧ ಮತ್ತು ಆಕ್ರಮಣಗಳೇ ಇವನ ಮುಖ್ಯ ಗುರಿಗಳು. ಇವನು ವಸ್ರ್ಸೇಲ್ಸ್ ಒಪ್ಪಂದದ ಕರಾರುಗಳನ್ನು ಧಿಕ್ಕರಿಸಿ ಶಸ್ತ್ರೀಕರಣ ಪ್ರಯತ್ನಗಳನ್ನು ಮುಂದುವರಿಸಿದ. ಅನಂತರ ರಾಷ್ಟ್ರಗಳ ಸಂಘದಿಂದ ಹೊರಬಂದು ಯುದ್ಧಾಕ್ರಮಣ ನೀತಿ ಅನುಸರಿಸಿದ. ರೈನ್‍ಲೆಂಡನ್ನು ಆಕ್ರಮಿಸಿ (1936) ಅಲ್ಲಿ ಸೇನೆಯನ್ನು ನೆಲೆಗೊಳಿಸಿದ. ಫ್ರಾನ್ಸಿನಿಂದ ಜರ್ಮನಿಯ ಸೊರ್‍ಕಣವೆ ಮರಳಿ ಪಡೆದ. ವಸ್ರ್ಸೇಲ್ಸ್ ಒಪ್ಪಂದದ ಸೇಡು ತೀರಿಸಿಕೊಳ್ಳಲು 1937 ರಲ್ಲಿ ಇಟಲಿ ಮತ್ತು ಜಪಾನ್‍ಗಳೊಂದಿಗೆ ಸೇರಿ ಬರ್ಲಿನ್, ರೋಮ್, ಟೋಕಿಯೋ-ಆಕ್ಸಿಸ್ ಎಂಬ ಶತ್ರುಕೂಟವನ್ನು ಸ್ಥಾಪಿಸಿ ಯುದ್ಧಾಕ್ರಮಣವನ್ನು ಆರಂಭಿಸಿದ. 1938 ಮಾರ್ಚ್ 11 ರಂದು ಇವನು ಆಸ್ಟ್ರಿಯವನ್ನು, 1939 ಮಾರ್ಚ್ 15ರಂದು ಜೆಕೊಸ್ಲೊವಾಕಿಯವನ್ನು ಆಕ್ರಮಿಸಿದ. 1938 ರಲ್ಲಿ ರಷ್ಯದೊಂದಿಗೆ ಅನಾಕ್ರಮಣ ಒಪ್ಪಂದ ಮಾಡಿಕೊಂಡ. 1939 ಸೆಪ್ಟೆಂಬರ್ 1 ರಂದು ಇವನು ಪೋಲೆಂಡ್‍ನ್ನು ಆಕ್ರಮಿಸಿದಾಗ ಎರಡನೆಯ ಮಹಾಯುದ್ಧ ಆರಂಭವಾಯಿತು. ಸೆಪ್ಟೆಂಬರ್ 3 ರಂದು ಇಂಗ್ಲೆಂಡ್ ಹಾಗೂ ಫ್ರಾನ್ಸ್‍ಗಳು ಸೇರಿ ಜರ್ಮನಿಯ ವಿರುದ್ಧ ಯುದ್ಧ ಸಾರಿದವು.

	ಇವನು ಆರಂಭದಲ್ಲಿ ತನ್ನ ಅತ್ಯಾಧುನಿಕ ಸಮರ ಸಾಧನಗಳಿಂದ ಮಿತ್ರ ರಾಷ್ಟ್ರಗಳ ವಿರುದ್ಧ ಪ್ರಚಂಡ ವಿಜಯ ಸಾಧಿಸಿದ. ಡೆನ್ಮಾರ್ಕ್, ನಾರ್ವೆ, ಹಾಲೆಂಡ್, ಬೆಲ್ಜಿಯಮ್ ಮತ್ತು ಫ್ರಾನ್ಸ್‍ಗಳು ಅವನ ವಶವಾದವು. 1941 ರಲ್ಲಿ ರಷ್ಯದ ಮೇಲೆ ದಾಳಿ ಮಾಡಿದನಾದರೂ ಆ ವೇಳೆಗೆ ಅಮೆರಿಕ ಮಿತ್ರ ರಾಷ್ಟ್ರಗಳ ಪರವಾಗಿ ಯುದ್ಧಕ್ಕೆ ದುಮುಕಿತು. ಅಮೆರಿಕ ಮಿತ್ರ ರಾಷ್ಟ್ರಗಳ ಸಮೇತ ಜರ್ಮನಿಯ ವಿರುದ್ಧ ದಾಳಿ ಮಾಡಿದಾಗ ಅದು ಸೋತು ಶರಣಾಯಿತು. ಇವನು 1945 ಮೇ 1 ರಂದು ಆತ್ಮಹತ್ಯೆ ಮಾಡಿಕೊಂಡ. ಇವನ ನಿಧನದೊಂದಿಗೆ ಜರ್ಮನಿಯಲ್ಲಿ ನಾಜೀ ಸರ್ವಾಧಿಕಾರ ಅಂತ್ಯಗೊಂಡಿತು.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

			*